ಬೆಲಾಕ್, ಜೋಸೆಫ್ ಹಿಲೇರಿ ಪೀಟರ್
1870-1953. ಇಂಗ್ಲಿಷ್ ಕವಿ, ಇತಿಹಾಸಕಾರ, ಪ್ರಬಂಧಕಾರ, ವಿಮರ್ಶಕ, ಪ್ಯಾರಿಸ್ಸಿನ ಸೇಂಟ್ ಕ್ಲೌಡ್ ಎಂಬಲ್ಲಿ ಜನನ. ತಂದೆ ಫ್ರಾನ್ಸಿನ ಬ್ಯಾರಿಸ್ಟರ್; ತಾಯಿ ಆಂಗ್ಲ ಮಹಿಳೆ. ಈತನ ನಾಲ್ವರು ಹತ್ತಿರದ ಬಂಧುಗಳು ನೆಪೋಲಿಯನ್ನನ ಬಳಿ ಜನರಲುಗಳಾಗಿದ್ದರು. ಸ್ವಯಂ ಈತನೇ ಫ್ರಾನ್ಸಿನ ಗೋಲಂದಾಜು (ಫಿರಂಗಿ ಹಾರಿಸುವ) ಇಲಾಖೆಯಲ್ಲಿ ಚಾಲಕವೃತ್ತಿಯಲ್ಲಿದ್ದ. ಬರ್ಮಿಂಗ್‍ಹ್ಯಾಮ್ ಸ್ಕೂಲಿನಲ್ಲಿ ಓದಿದ ಈತ 1893ರಲ್ಲಿ ಆಕ್ಸ್‍ಫರ್ಡಿಗೆ ಹೋಗಿ ಇತಿಹಾಸದ ಆನರ್ಸ್‍ಪದವಿಯನ್ನು ಪ್ರಥಮದರ್ಜೆಯಲ್ಲಿ ಪಡೆದು ಅಲ್ಲಿಯ ಇತಿಹಾಸದ ಆನರ್ಸ್‍ಪದವಿಯನ್ನು ಪ್ರಥಮದರ್ಜೆಯಲ್ಲಿ ಪಡೆದು ಅಲ್ಲಿಯ ಇತಿಹಾಸ ಸಂಘದ ಅಧ್ಯಕ್ಸ ಪದವಿಗೇರಿದ. ಈತನ ಮೊದಲ ಪುಸ್ತಕ ವರ್ಸಸ್ ಅಂಡ್ ಸಾನೆಟ್ಸ್ 1895ರಲ್ಲಿ ಹೊರಬಂತು. ಅದೇ ವರ್ಷ ಪ್ರಕಟವಾದ ಅಸಂಬದ್ಧ ಕವಿತೆಗಳೆನಿಸಿದ ದಿ ಬ್ಯಾಡ್ ಚೇಲ್ಡ್ಸ್ ಬುಕ್ ಆಫ್ ಬೀಸ್ಟ್ಸ್ ಈತನಿಗೆ ಅಪಾರ ಹೆಸರುತಂದಿತು. ಅನಂತರ ಇದೇ ಮಾಲಿಕೆಯಲ್ಲಿ ಮೋರ್ ಬೀಸ್ಟ್ಸ್ ಫಾರ್ ವರ್ಸ್ ಚಿಲ್ಡ್ರನ್ (1897) ಮತ್ತು ಕಾಷನರಿ ಟೇಲ್ಸ್ (1907) ಪ್ರಕಟಗೊಂಡವು. ಈತನ ಐತಿಹಾಸಿಕ ಪುಸ್ತಕಗಳಲ್ಲಿ ಡಾಂಟನ್ (1899), ರಾಬಸ್‍ಪ್ಯೇರ್ (1901), ನಪೋಲಿಯನ್ (1932) ಮತ್ತು ಕ್ರಾಮ್‍ವೆಲ್ (1934) ಇವರುಗಳ ಜೀವನಚರಿತ್ರೆ ಪ್ರಮುಖವಾದವು. ಸ್ಯಾಲ್ ಫೋರ್ಡಿನಿಂದ ಆರಿಸಿಬಂದ ಲಿಬರಲ್ ಪಕ್ಷದ ಪಾರ್ಲಿಮೆಂಟ್ ಸದಸ್ಯನಾಗಿ 1906-10 ಅವಧಿಯಲ್ಲಿ ಸೇವೆ ಸಲ್ಲಿಸಿದ. ಅನಂತರ 1911-13 ಅವಧಿಯಲ್ಲಿ ತಿಂಗ್ ಈಸ್ಟ್ ಲಂಡನ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥನಾದ. 

	ಇಮ್ಯಾನ್ಯುಯಲ್ ಬರ್ಡನ್ (1904); ಪಾಂಗೊ ಅಂಡ್ ದಿ ಬುಲ್ (1910); ಮಿಸ್ಟರ್ ಕ್ಲಟರ್‍ಬಕ್ಸ್ ಎಲೆಕ್ಷನ್ (1908); ದಿ ಗಿರೋನ್‍ಡಿನ್ (1911); ದಿ ಗ್ರೀನ್ ಓವರ್‍ಕೋಟ್ (1912); ದಿ ಮ್ಯಾನ್ ವೂ ಮೇಡ್ ಗೋಲ್ಡ್ (1930)-ಇವು ಈತನ ಕಾದಂಬರಿಗಳಲ್ಲಿ ಕೆಲವು. ದಿ ಪಾತ್ ಟು ರೋಮ್ (1902); ದಿ ಫೋರ್‍ಮೆನ್ (1912); ದಿ ಕ್ರೂಸ್ ಆಫ್ ದಿ ನೋನ (1925)-ಇವು ಈತನ ಪ್ರವಾಸ ಸಾಹಿತ್ಯದಲ್ಲಿಯ ಕೆಲವು ಪುಸ್ತಕಗಳು. ಆನ್ ನತಿಂಗ್ (1908), ಆನ್ ಎವ್ವೆರಿ (1909), ಆನ್ ಎನಿತಿಂಗ್ (1910)-ಇವು ಪ್ರಬಂಧ ಸಂಕಲನಗಳು. 

	1934ರಲ್ಲಿ ಈತನಿಗೆ ಪೋಪ್‍ನೈಟ್ ಕಮ್ಯಾಂಡರ್ ಪ್ರಶಸ್ತಿ ನೀಡಲಾಯಿತು. ಡಬ್ಲಿನ್ ಮತ್ತು ಗ್ಲಾಸ್ಗೊ ವಿಶ್ವವಿದ್ಯಾಲಯಗಳು ಈತನಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದುವು. 					 
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ